ಕೈಗೊಡಲಿ

ಪೂರ್ವ ಶಿಲಾಯುಗದಲ್ಲಿ ಬಳಕೆಯಲ್ಲಿದ್ದ ಕಲ್ಲಿನ ಆಯುಧಗಳಲ್ಲಿ ಒಂದು (ಹ್ಯಾಂಡ್ ಆಕ್ಸ್). ಮುಖ್ಯವಾದ ಒಂದು ಸಂಸ್ಕøತಿಯ ಪ್ರತೀಕ. ಇದನ್ನು ಸಾಮಾನ್ಯವಾಗಿ ಬೆಣಚು ಅಥವಾ ಚಕಮಕಿ (ಫ್ಲಿಂಟ್) ಕಲ್ಲಿನ ತಿರುಳಿನ ಭಾಗದಿಂದ ಮಾಡುತ್ತಿದ್ದರು. ಕಲ್ಲಿನ ಎರಡು ಪಕ್ಕಗಳಿಂದಲೂ ಚಕ್ಕೆಗಳನ್ನು ತೆಗೆದು, ಒಂದು ಕೊನೆಯನ್ನು ಮೊನಚಾಗಿಯೂ ಅದರ ಎದುರು ಭಾಗವನ್ನು ಕೈಪಿಡಿಯಾಗಿ ಉಪಯೋಗಿಸಲು ಮೊಂಡಾಗಿಯೂ ಪೇರು ಹಣ್ಣಿನ ಆಕಾರದಲ್ಲಿ ಕೆತ್ತುತ್ತಿದ್ದರು. ಕ್ರಮೇಣ ಕೈಗೊಡಲಿಗಳಲ್ಲಿ ಅನೇಕ ವಿಧಗಳುಂಟಾದವು. ಅವುಗಳ ಆಕಾರದಲ್ಲಿ ವೈವಿಧ್ಯ ಬೆಳೆದಂತೆ ಅವಕ್ಕೆ ಅನುಗುಣವಾಗಿ ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಉದ್ಯಮಗಳು ಬೆಳೆದುಬಂದುವು. ಈವರೆಗೆ ದೊರಕಿರುವ ಮಾಹಿತಿಗಳ ಪ್ರಕಾರ ಇದರ ಉಗಮವಾದ್ದು ಪೂರ್ವ ಮತ್ತು ಮಧ್ಯ ಆಫ್ರಿಕಗಳಲ್ಲಿ. ಆಫ್ರಿಕದ ವಿವಿಧ ಪ್ರದೇಶಗಳಲ್ಲೂ ಯೂರೋಪ್ ಮತ್ತು ಪಶ್ಚಿಮ ಏಷ್ಯ ಪ್ರದೇಶಗಳಲ್ಲೂ ಕೈಗೊಡಲಿ ಸಂಸ್ಕøತಿ ಹಬ್ಬಿತು. ಭಾರತದಲ್ಲಿ ವಿಂಧ್ಯಪರ್ವತ ಪ್ರದೇಶ ಮತ್ತು ಪರ್ಯಾಯದ್ವೀಪೀಯ ಭಾರತದವರೆಗೂ ಇದು ಕ್ರಮೇಣ ವ್ಯಾಪಿಸಿತು. ಕೈಗೊಡಲಿಗಳನ್ನು ಮೊದಲು ಗುರುತಿಸಿದ್ದು ಫ್ರಾನ್ಸಿನಲ್ಲಿ. ಅಲ್ಲಿ ಅಬೆವಿಲಿಯನ್ ಮತ್ತು ಅಷುಲಿಯನ್ (ನೋಡಿ- ಅಷುಲಿಯನ್-ಉದ್ಯಮ) ಎಂಬ ಎರಡು ಹಂತಗಳು ಕಂಡುಬಂದಿವೆ. ಮೃದುವಾದ ಮೇಲ್ಮೈಯಿಂದ ಕೂಡಿದ ಮರದ ಅಥವಾ ಎಲುಬಿನ ಸುತ್ತಿಗೆಯಿಂದ ಹೊಡೆದು ಸಣ್ಣ ಚಕ್ಕೆಗಳನ್ನು ತೆಗೆದು, ಕೊಡಲಿಯ ಅಂಚುಗಳನ್ನು ಚೂಪಾಗಿಯೂ ನೇರವಾಗಿಯೂ ಮಾಡುವ ಕಲೆಯೇ ಅಷುಲಿಯನ್ ಹಂತದ ವಿಶಿಷ್ಟ ಲಕ್ಷಣ. ಅಬೆವಿಲಿಯನ್ ಹಂತದಲ್ಲಿ ಎರಡು ವರ್ಗಗಳನ್ನೂ ಅಷುಲಿಯನ್ ಹಂತದಲ್ಲಿ 4-5 ವರ್ಗಗಳನ್ನೂ ಕಾಣಬಹುದು. ತಿರುಳ್ಗಲ್ಲಿನಿಂದಲೇ ನಿರ್ಮಿಸುತ್ತಿದ್ದ ಕೈಗೊಡಲಿಗಳನ್ನು ಕ್ರಮೇಣ ದಪ್ಪ ಚಕ್ಕೆಗಳಿಂದಲೂ ಮಾಡತೊಡಗಿದರು. ಕೈಗೊಡಲಿ ಸಂಸ್ಕøತಿಯಲ್ಲಿ ಕೊನೆಯದು ಮಿಕಾಕ್ವಿಯನ್ ಹಂತ. ನಾಲಗೆಯಂತೆ ಚಾಚಿರುವ ಮೊನೆಗಳುಳ್ಳ ಅಂದವಾದ ಕೈಗೊಡಲಿಗಳನ್ನು ಮಾಡುತ್ತಿದ್ದುದು ಈ ಹಂತದ ವೈಶಿಷ್ಟ್ಯ. ಅಗೆಯಲು, ಪ್ರಾಣಿಗಳ ಚರ್ಮವನ್ನು ಸುಲಿದು ಹದಗೊಳಿಸಲು ಮತ್ತು ಅಂಥ ಹಲವಾರು ಕಾರ್ಯಗಳಿಗೆ ಆದಿಮಾನವರು ಕೈಗೊಡಲಿಗಳನ್ನು ಬಳಸುತ್ತಿದ್ದರು.						(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ